ಬೆಂಗಳೂರು: ದಿನಬಳಕೆ ವಸ್ತುಗಳು, ನೀರು ಮತ್ತು ವಿದ್ಯುತ್ ದರ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಈಗ ಮತ್ತೊಂದು ಶಾಕ್ ನೀಡಿದೆ. ಬಜೆಟ್‌ನಲ್ಲಿ ಘೋಷಿಸಿದಂತೆ ಆದಾಯ ಕ್ರೋಢೀಕರಣದ ಉದ್ದೇಶದಿಂದ ಸರ್ಕಾರವು ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದು, ಮುಂದಿನ ವಾರದಿಂದಲೇ ಹೊಸ ದರಗಳು ಅನ್ವಯವಾಗಲಿವೆ.
ವಿಶೇಷವೆಂದರೆ, ಈ ಬಾರಿ ಐಷಾರಾಮಿ ಬ್ರ್ಯಾಂಡ್‌ಗಳಿಗಿಂತ ಹೆಚ್ಚಾಗಿ ಬಡ ಹಾಗೂ ಮಧ್ಯಮ ವರ್ಗದವರು ಬಳಸುವ ‘ಎಕಾನಮಿ’ ಮತ್ತು ‘ಲೋ ಪ್ರೈಸ್’ ಬ್ರ್ಯಾಂಡ್‌ಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗಿದೆ. ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸುವ ಹೊಸ ಪದ್ಧತಿಯಿಂದಾಗಿ ಜನಪ್ರಿಯ ಬ್ರ್ಯಾಂಡ್‌ಗಳ ಬೆಲೆ ಗಣನೀಯವಾಗಿ ಏರಿಕೆಯಾಗಲಿದೆ.
ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಸಾಮಾನ್ಯ ಬ್ರ್ಯಾಂಡ್‌ಗಳ ಬೆಲೆಯಲ್ಲಿ 10 ರಿಂದ 25 ರೂಪಾಯಿಗಳವರೆಗೆ ಹೆಚ್ಚಳವಾಗುವ ಸಾಧ್ಯತೆಯಿದೆ.ಬೆಲೆ ಏರಿಕೆಗೆ ಕಾರಣವೇನು?
ರಾಜ್ಯ ಸರ್ಕಾರದ ಖಜಾನೆಯನ್ನು ತುಂಬಿಸಲು ಅಬಕಾರಿ ಇಲಾಖೆಯ ಮೇಲೆ ಹೆಚ್ಚಿನ ಜವಾಬ್ದಾರಿ ಇರಿಸಲಾಗಿದೆ. ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದಂತೆ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಈ ಕುರಿತು ಈಗಾಗಲೇ ಕರಡು ಅಧಿಸೂಚನೆ ಪ್ರಕಟವಾಗಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಹೊಸ ಬೆಲೆ ಪಟ್ಟಿ ಅಧಿಕೃತವಾಗಿ ಜಾರಿಗೆ ಬರಲಿದೆ.
ಸಾಮಾನ್ಯರ ಆಕ್ರೋಶ
”ಬೆಲೆ ಏರಿಕೆ ಬಿಸಿಯಿಂದ ಸ್ವಲ್ಪ ನೆಮ್ಮದಿ ಪಡೆಯೋಣ ಅಂದ್ರೆ ಎಣ್ಣೆ ಬೆಲೆಯನ್ನೂ ಜಾಸ್ತಿ ಮಾಡಿದ್ದಾರೆ. ಸರ್ಕಾರ ಎಲ್ಲದರ ಮೇಲೂ ತೆರಿಗೆ ಹಾಕುತ್ತಾ ಹೋದರೆ ನಾವು ಬದುಕುವುದಾದರೂ ಹೇಗೆ?” ಎಂಬ ಆಕ್ರೋಶದ ಮಾತುಗಳು ಮದ್ಯಪ್ರಿಯರಿಂದ ಕೇಳಿಬರುತ್ತಿವೆ. ಒಟ್ಟಾರೆಯಾಗಿ, ದಿನದ ಕಾಯಕದ ಬಳಿಕ ಆಯಾಸ ಪರಿಹರಿಸಿಕೊಳ್ಳಲು ಮದ್ಯವನ್ನೇ ನೆಚ್ಚಿಕೊಂಡಿದ್ದ ಕೂಲಿ ಕಾರ್ಮಿಕರಿಗೆ ಸರ್ಕಾರದ ಈ ನಿರ್ಧಾರ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ.